ಡಾ l ಶಿವರಾಮ ಕಾರಂತರ ಪರಿಚಯ ಸಾಹಿತ್ಯ ಸಮಗ್ರವಾಗಿ, ಈ ಸಂದರ್ಭಕ್ಕೆ ಸೂಕ್ತವಾಗಿದೆ. ಕೋಟದಲ್ಲಿ ಕಾರಂತ ಥೀಮ್ ಪಾರ್ಕ್ ಸಧ್ಯ ನಿರಂತರ ಕಾರ್ಯಕ್ರಮದ ಹಬ್ಬದ ಕೇಂದ್ರವಾಗಿದೆ. ಪುತ್ತೂರಿನ ಬಾಲವನಕ್ಕೂ ಅಂತಹ ಅರ್ಹತೆ ಸಲ್ಲಲು ಒಬ್ಬ ಕಾರಣನಾಗಬೇಕು.
"ಕಾರಂತ 90"ರ ನೆನಪಿನ ದಿನಗಳಲ್ಲಿ ಗೆಜ್ಜೆ ಕಟ್ಟಿ ಕುಣಿದ ಕ್ಷಣಗಳನ್ನು ಹತ್ತಿರದಿಂದ ಕಂಡವ ನಾನೂ ಒಬ್ಬ. ಕಾರಂತರ 90 ಚಿತ್ರಗಳನ್ನು ಮೋಹನ್ ಸೋನರ ಜತೆ ಸೇರಿ ಪ್ರದರ್ಶಿಸಲು ಮೂರು ದಿನ ಕೋಟದಲ್ಲೇ ಉಳಿದು ಸಂಭ್ರಮಿಸಿದ ಕ್ಷಣದ ನೆನಪು ಮರುಕಳಿಸಿತು.
ಕಾರಂತರಿಗೆ 90 ಆಗುವಾಗ ಚಂದದ ಸಾಹಿತ್ಯೋತ್ಸವ ಮಾಡಬೇಕೆಂದಾಯಿತು ಕೋಟದಲ್ಲಿ. ನಾನದರ ಕಾರ್ಯಾಧ್ಯಕ್ಷ. ಎರಡನೇ ದಿನ ಯಕ್ಷಗಾನ ಪ್ರಾತ್ಯಕ್ಷಿಕೆ. ಕೆರೆಮನೆ ಮಹಾಬಲ ಹೆಗಡೆ ಭಾಗವತಿಕೆಯಲ್ಲಿ ನಡೆಯುತ್ತಿತ್ತು.
ಅಷ್ಟರಲ್ಲಿ ನನ್ನ ಮಿತ್ರ ಮಂಗಳೂರಿನ ಹೆಸರಾಂತ ಛಾಯಾಗ್ರಾಹಕ ಶ್ರೀ ಯಜ್ಞ ಬಂದು ನನ್ನ ಹತ್ರ ಕಾರಂತರನ್ನು ಕುಣಿಸುತ್ತೀರಾ ಎಂದು ಕೇಳಿದರು. ನನಗೆ ಒಳ್ಳೆಯ ಐಡಿಯಾ ಎಂತೆನಿಸಿ, ಯಾಕಾಗಬಾರದು ಎಂದುಬಿಟ್ಟೆ. ಯಜ್ಞ ಖುಷಿಯಿಂದ ತೆರಳಿ ಕಾದರು.
ನಾನು ಧೈರ್ಯ ಮಾಡಿ ವೇದಿಕೆ ಪಕ್ಕದಲ್ಲಿ (ಸೈಡ್ ವಿಂಗ್ನಲ್ಲಿ) ಕೂತು ಪ್ರಾತ್ಯಕ್ಷಿಕೆ ಕಾಣುತ್ತಿದ್ದ ಕಾರಂತರನ್ನು ಬೇಕೆಂತಲೇ ಕೆಣಕಿದೆ. " ಸ್ವಾಮೀ, ಒಬ್ಬರು ಕೇಳ್ತಿದ್ದಾರೆ, ಈ ಪ್ರಾಯದಲ್ಲಿ ಕಾರಂತರಿಗೆ ಕುಣೀಲಿಕ್ಕಾಗುತ್ತದಾ?" ಎಂತ ಅಂದೆ. ಸಹಜವಾಗಿಯೇ ಕಾರಂತರು ಇದಕ್ಕೆ ಬಲಿ ಬಿದ್ದರು. "ಯಾಕೆ? ನನಗೆ ಸರಿಯಾಗಿ ಹಾಡುವ ಭಾಗವತ, ಬಾರಿಸುವ ಮದ್ದಳೆಯವ, ಕೆಲವು ಪದ್ಯ ಇದ್ದರೆ ಕುಣಿದು ತೋರಿಸ್ತೇನೆ" ಎಂದು ಬಿಟ್ಟರು. ನನ್ನ ರೋಮಾಂಚನ, ಸಂಭ್ರಮ ಅಷ್ಟಿಷ್ಟಲ್ಲ.
ಹಾಡುತ್ತಿದ್ದ ಮಹಾಬಲ ಹೆಗಡೆ ರನ್ನ ತೋರಿಸಿ ಭಾಗವತರು ಅವರಾಗ ಬಹುದಾ ಎಂತ ಕೇಳಿದೆ. ಅಂವ ಹಾಡಿದರೆ ಹಾಡಿಯಾನು ಎಂದರು. ಮದ್ದಲೆಗೆ ಯಾರಾಗಬಹುದು ಎಂತ ಕೇಳಿದೆ. ಹಿರಿಯಡ್ಕ ಗೋಪಾಲಯ್ಯ ಇದ್ರಾ ನೋಡಿ ಎಂದಾಗ ಸಭೆಯಲ್ಲಿ ಅವರ ಹಣ್ಣುಗೂದಲಿನ ತಲೆ ಕಂಡು ಇದ್ದಾರೆ ಎಂದೆ. ಕೇಂದ್ರದ ವಿದ್ಯಾರ್ಥಿಗಳು ಯಾರಾದರೂ ಇದ್ದರೆ ಕರ್ಕಂಡ್ ಬನ್ನಿ, ನನಗೆ ಬೇಕಾದ ಪದ್ಯ ಅವರ ನೆನಪಿನಿಂದ ಬರೆಸಿಕೊಳ್ತೆ ಎಂದಾಗ, ವಿದ್ಯಾರ್ಥಿಯೊಬ್ಬನನ್ನು ತಲಾಶು ಮಾಡಿ ಅವರಿಗೆ ಒಪ್ಪಿಸಿದೆ. ಆತನಿಗೆ ನೆನಪಿದ್ದ, ಅವರಿಗೆ ಕುಣಿಯಲು ಬೇಕಾಗಿದ್ದ ಪದ್ಯಗಳು ಸಿಕ್ಕಿದುವು. ಸೀದಾ ಹೋಗಿ ಹಾಡುತ್ತಿದ್ದ ಮಹಾಬಲ ಹೆಗಡೆರ ಕಿವಿಯಲ್ಲಿ ಹೇಳಿದೆ, ಕಾರಂತರು ಕುಣೀತ್ರ್, ನೀವ್ ಹಾಡ್ಕ್ ಅಂದಾಗ "ನಿಮ್ಗೆ ಮಂಡೆಸಮ ಇಲ್ಯಾ? ಹೆಚ್ ಕಮ್ಮಿ ಆದ್ರೆ ಅವ್ರ ಹತ್ರ ಪೆಟ್ ತಿನ್ಕ್ ಅಂತ ಮಾಡೀರ್ಯಾ?" ಎಂದರು. "ನಮಗೋಸ್ಕರ ತಿನ್ನಿ" ಎಂದೆ ನಗುತ್ತ. ಅಡ್ಡಿಲ್ಲೆ ಎಂದರು.
ಹಿರಿಯಡ್ಕ ಗೋಪಾಲಯ್ಯ ಮದ್ಲೆ ಬಾರ್ಸುವ ಅಂದರು. ಎಲ್ಲ ರೆಡಿ ಆಯ್ತು. ಯಜ್ಞ ರ ಹತ್ರ ಸ್ವಲ್ಪ ಕಾಯಿನಿ, ಕಾರಂತ್ರು ಕುಣೀತ್ರು ಎಂದೆ. ಖುಷಿಯಾದ ಯಜ್ಞ ಕೆಮರಾ ರೆಡಿಮಾಡಿ ಮುಂದೆ ಬಂದು ಕೂತ್ರು.
ಪ್ರಾತ್ಯಕ್ಷಿಕೆಯ ಮಧ್ಯಂತರದಲ್ಲಿ ನಾನು ವೇದಿಕೆಗೆ ನುಗ್ಗಿ "ಈ ಕಾರ್ಯಕ್ರಮ ವೀಕ್ಷಿಸುತ್ತಿರುವ ಕಾರಂತಾಭಿಮಾನಿಗಳಿಗೆ ಈಗ ಒಂದು ಬೋನಸ್ ಕಾರ್ಯಕ್ರಮ ನೀಡ್ತೇವೆ" ಎಂದಾಗ ಜನಕ್ಕೆ ಕುತೂಹಲ. "ಈಗ ಕಾರಂತರು - ೯೦ ರ ಕಾರಂತರು- ಕುಣಿಯುತ್ತಾರೆ" ಎಂದು ಘೋಷಿಸಿದೆ. ಪ್ರಚಂಡ ಕರತಾಡನ, ಹರ್ಷೋದ್ಗಾರ ಬಂತು.
"ಎಲ್ಲ ರೆಡಿ" ಎಂದೆ ಕಾರಂತ್ರ ಹತ್ರ. ಕೂಡಲೇ ಎದ್ದ ಕಾರಂತರು ಅಂಗಿ ಕಳಚಿ ನನ್ನ ಕೈಗೆ ಕೊಟ್ಟರು. ಹೆಗಲ ಶಾಲು ತೆಗೆದು ಸೊಂಟಕ್ಕೆ ಬಿಗಿದುಕೊಂಡರು. ಆಟದವರೊಬ್ಬರು ಬಂದು ಅವರ ಕಾಲ್ಗಳಿಗೆ ಗೆಜ್ಜೆ ಕಟ್ಟಿದರು. ಮಹಾಬಲ ಹೆಗಡೆ ಹಿಂದೆ ಕಂಡು ಸನ್ನೆ ಪಡೆದು ಹಾಡು ಶುರುಮಾಡುತ್ತಲೇ ಕಾರಂತರು ರಂಗಕ್ಕೆ ಧುಮುಕಿಬಿಟ್ಟರು. ಜನ ಕಿವಿ ಗಡಚಿಕ್ಕುವಂತೆ ಕೈತಟ್ಟಿ ಸ್ವಾಗತಿಸಿದರಲ್ಲದೇ, ಹೊರಗೆ ಎಲ್ಲೆಲ್ಲಿಯೋ ಇದ್ದ ಜನಗಳೆಲ್ಲ ಈ ಅಪೂರ್ವ ದ್ರಶ್ಯ ಕಾಣಲು ಓಡೋಡಿ ಬಂದರು. ಸಭಾಂಗಣದಲ್ಲಿ ಆಸನಗಳೆಲ್ಲ ಭರ್ತಿಯಾಗಿ ಜನ ಜಾಗ ಸಿಕ್ಕಿದಲ್ಲೆಲ್ಲಾ ನಿಂತು, ಕೂತು ವೀಕ್ಷಿಸುತ್ತಿದ್ದರು. ನಾನು ಈ ಲೋಕದಲ್ಲೇ ಇರಲಿಲ್ಲ. ಒಂದು ಖುಷಿಯ ಪ್ರಪಂಚದಲ್ಲಿದ್ದು ಕಣ್ತುಂಬಿಕೊಳ್ಳುತ್ತಿದ್ದೆ.
ನಂತರ ನಡೆದದ್ದು ಈಗ ಇತಿಹಾಸ. ಯಜ್ಞ ಬಿಟ್ಟ ಕಣ್ಣಿಂದ ಕಾರಂತರ ಕುಣಿತ ಕಾಣುತ್ತ ಕ್ಲಿಕ್ ಮಾಡುತ್ತ ಇದ್ದಾಗ, ಕಾರಂತರು ಆವೇಶ ಬಂದವರಂತೆ ಹಾಡಿಗೆ ಸರಿಯಾಗಿ ಹೆಜ್ಜೆ ಹಾಕುತ್ತ, ಭಾವ ಪ್ರದರ್ಶನ ಮಾಡುತ್ತ ತಲ್ಲೀನರಾಗಿ ಬಿಟ್ಟಿದ್ದರು. ಜನ ಬೆಕ್ಕಸ ಬೆರಗಾಗಿ ಈ ಅಮ್ರತ ಗಳಿಗೆಯನ್ನು ಬಿಡದೇ ಸವಿಯುತ್ತಲಿದ್ದರು. ಅಷ್ಟರಲ್ಲಿ ಒಂದು ಸಂಗತಿ ಘಟಿಸಿ ನಾನು ನಡುಗಿಬಿಟ್ಟೆ!
ರಂಗದ ಮೇಲೆ ಕಾರಂತರ ಗಂಧರ್ವ ನ್ರತ್ಯ ಇನ್ನಿಲ್ಲದ ರೀತಿ ನಡೆಯುತ್ತಲಿದ್ದರೆ, ಕಾರಂತರು ಮಾಯಾ ಶೂರ್ಪನಖಿಯಾಗಿ "ಮೆಲ್ಲ ಮೆಲ್ಲ ಬಂದಳಬ್ದಲೋಚನೆ" ಹಾಡಿಗೆ ಸರಿಯಾಗಿ ಒಯ್ಯಾರದ ಮಾಯಾಂಗನೆಯಂತೆ ಕುಣಿಯುತ್ತಾ "ಕನ್ನಡಿಯಲಿ ತನ್ನ ನೋಡುತ, ತನ್ನಲಿ ತಾನು ಮಾತನಾಡುತ" ಹಾಡಿಗೆ ಸಾಕ್ಷಾತ್ ನವತರುಣಿಯ ಹಾಗೆ ಶೇಳೆ ಮಾಡಿ ಕುಣಿಯುತ್ತಿದ್ದನ್ನು ಮೈಮರೆತು ನಾನು ಸವಿಯುತ್ತಿದ್ದರೆ, ಕಾರಂತರ ವೈದ್ಯರಾಗಿದ್ದ ಡಾ. ಚಿತ್ತರಂಜನ್ ಶೆಟ್ಟರು ನನ್ನನ್ನು ಜಗಲಿಗೆ ಕರೆದು," ಯಾರದು, ಕಾರಂತರನ್ನು ಕುಣಿಸಿದ್ದು?" ಎಂತ ಕೇಳಿದಾಗ "ನಾನು" ಎಂತ ಹೆಮ್ಮೆಯಿಂದ ಹೇಳಿದೆ." ನಿಮಗೆ ಹುಚ್ಚಾ? ಅವರಿಗೆ ಹಾರ್ಟ್ ಎನ್ ಲಾರ್ಜ್ ಮೆಂಟ್ ಇತ್. ಈ ೯೦ ರ ಹಬ್ಬದ ದಿವ್ಸವೇ ಅವ್ರ್ ಸಾಯ್ಕ್ಂದಿತ್ತಾ" ಎಂದು ಅವರು ಜೋರು ಮಾಡಿದಾಗ ನಾನು ಬೆದರಿ ಬೆವರಿಬಿಟ್ಟೆ. "ನಿಲ್ಸಿ ಕುಣ್ತ" ಎಂದವರು ಆಜ್ಙಾಪಿಸಿದಾಗ ನಿಶ್ಚೇತನವಾದಂತಿದ್ದ ನಾನು ಸೈಡ್ ವಿಂಗ್ ಗೆ ಧಾವಿಸಿ ಹೋದೆ.
ಅಲ್ಲಿಂದಲೇ ಕಾರಂತರಿಗೆ ಸನ್ನೆ ಮಾಡಿ ಸಾಕು, ನಿಲ್ಲಿಸಿ ಎಂದರೆ ಅವರು ಕುಣಿಯುತ್ತಾ ಸನ್ನೆಯಿಂದಲೇ ನನಗೆ ಆಗೋದಿಲ್ಲ ಎಂದು ಸೂಚಿಸಿ ಬಿಟ್ಟರು. ಕೈ ಮುಗಿದೆ ಅವರಿಗೆ, ಈ ಕಡೆ ಬನ್ನಿ ಎಂತ. ದೊಡ್ಡ ಕಣ್ಣು ಬಿಟ್ಟರು ಅಸಹನೆಯಿಂದ. ಯಾಪಾರ ಕೋಚಾಯಿತಲ್ಲ ಎಂದುಕೊಂಡೆ. ಕೈ ಕೈ ಹಿಸಿದುಕೊಂಡೆ. ಕಡೆಗೆ ಒಂದು ಉಪಾಯ ಹೂಡಿದೆ. ಸೀದಾ, ಅವರು ಕುಣಿಯುತ್ತಿದ್ದಂತೆ ರಂಗಕ್ಕೆ ಸರಿದೆ. ಅವರ ಹಿಂದೆ ನಿಂತೆ. ಜನಗಳಿಗೆ ಸನ್ನೆ ಮಾಡಿದೆ - ಎಲ್ಲ ಎದ್ದು ನಿಂತು (ಕರತಾಡನ) ಸ್ಟ್ಯಾಂಡಿಂಗ್ ಒವೇಶನ್ ಮಾಡಿ ಎಂತ. ಜನರೆಲ್ಲ ಕೂಡಲೇ ಸ್ಪಂದಿಸಿ ಎದ್ದುಬಿಟ್ಟರು. ಕರತಾಡನ ನಿಲ್ಲಲೇ ಇಲ್ಲ. ಕಾರಂತರಿಗೆ ಅರಿವಾಗಿರಬೇಕು, ಕುಣಿತ ನಿಲ್ಲಿಸಿ ಬದಿಗೆ ಬಂದರು. ಬರುತ್ತಾ ನನ್ನನ್ನುದ್ದೇಶಿಸಿ "ಹಾಗೆಲ್ಲ ಮಧ್ಯದಲ್ಲಿ ನಿಲ್ಲಿಸಲಿಕ್ಕಾಗುವುದಿಲ್ಲ. ರಸಭಂಗ ಆಗ್ತದೆ" ಎಂದು ಗುಡುಗಿ ಕುಳಿತರು. ಮೈಯಿಡೀ ನೆನೆದು ಚಂಡಿಯಾಗಿತ್ತು. ಗೆಜ್ಜೆ, ಶಾಲು ಬಿಚ್ಚಿ ವಿಶ್ರಾಂತಿ ಪಡೆಯಲು ಅವರನ್ನು ಮನೆಗೆ ಕಳುಹಿಸಿದ ಮೇಲೇ ನಾನು ನೆಮ್ಮದಿಯಾದದ್ದು. ಪುಣ್ಯಕ್ಕೆ ಕಾರಂತರಿಗೇನೂ ಆಗಲಿಲ್ಲ. ನಂತರವೂ ಹಲವು ವರ್ಷ ನಮ್ಮೊಂದಿಗಿದ್ದರು ಎಂಬುದೇ ಸಮಾಧಾನದ, ಸಂತೋಷದ ಸಂಗತಿಯಾಗಿತ್ತು.
ನೀವು ಈ ದಿನ ಹಾಕಿದ ಫೋಟೋದಲ್ಲಿ ನಾನು ರಂಗದ ಮೇಲೆ ಕಾರಂತರ ಹಿಂದೆ ನಿಂತು ಜನಕ್ಕೆ ಸನ್ನೆ ಮಾಡುತ್ತಿದ್ದುದು ದಾಖಲಾಗಿದ್ದು ಕಂಡಾಗ ನೆನಪಿನ ಸುರುಳಿ ಬಿಚ್ಚಿಕೊಂಡು ಆ ದಿನದ ಘಟನೆ ಬಣ್ಣಿಸುವಂತಾಯಿತು. ಶುಭಾಶಯಗಳು.
- ಗೋಪಾಡ್ಕರ್ ಮಂಗಳೂರು