ಪರ್ಲಡ್ಕ, ಪುತ್ತೂರು, ಕರ್ನಾಟಕ - 574201
ಸಮಯ
10:00 AM - 6:00 PM

ಬಾಲವನದಲ್ಲಿ ಮಕ್ಕಳ ಬೇಸಿಗೆ ಶಿಬಿರ ‘ಬಣ್ಣ ಭಾವ’

ವರದಿ

ಪುತ್ತೂರು : ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಡಾ| ಶಿವರಾಮ ಕಾರಂತ ಬಾಲವನ ಸಮಿತಿ, ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ತಾಲೂಕು ಇದರ ವತಿಯಿಂದ ದಿನಾಂಕ 20.05.2022 ರಿಂದ 24.05.2022ರ ತನಕ 5 ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರ ‘ಬಣ್ಣ ಭಾವ’ವು ಬಾಲವನದಲ್ಲಿ ನಡೆಯಿತು. ಸಹಾಯಕ ಆಯುಕ್ತರಾದ ಶ್ರೀ ಗಿರೀಶ್ ನಂದನ್ ಈ ಶಿಬಿರದ ಉದ್ಘಾಟಿಸಿ, ಮಕ್ಕಳನ್ನು ಎಳವೆಯಿಂದಲೇ ಕ್ರಿಯಾಶೀಲಗೊಳಿಸಬೇಕು. ಆ ಕಾರಣಕ್ಕಾಗಿ ಈ ಶಿಬಿರ ಹೆಚ್ಚು ಪ್ರಸ್ತುತ ಎಂದ ಅವರು ಮುಂದಿನ ದಿನಗಳಲ್ಲಿ ಬಾಲವನದಲ್ಲಿ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನು ರೂಪಿಸಲಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನಗರ ಸಭೆಯ ಅಧ್ಯಕ್ಷರಾದ ಶ್ರೀ ಜೀವಂಧರ್ ಜೈನ್ ಮಾತನಾಡಿ ಮಕ್ಕಳ ಸಂತಸದ ಕಲಿಕೆಗೆ ಬೇಸಿಗೆ ಶಿಬಿರಗಳು ಹೇಳಿ ಮಾಡಿದಂತಿದೆ. ಕೊರೊನಾದಿಂದ ಎರಡು ವರ್ಷಗಳಿಂದ ಕಳೆಗುಂದಿದ ಮಕ್ಕಳ ಚಟುವಟಿಕೆಗಳಿಗೆ ಜೀವತುಂಬುವ ಕೆಲಸವನ್ನು ಬಾಲವನ ಸಮಿತಿಯವರು ಮಾಡುತ್ತಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳಿಗೆ ನಗರಸಭೆಯ ವತಿಯಿಂದ ಬೆಂಬಲ ನೀಡಲಾಗುವುದು ಎಂದರು.

ಬಾಲವನದ ಕಾರ್ಯಕ್ರಮ ಸಂಯೋಜಕರಾದ ಶ್ರೀ ಜಗನ್ನಾಥ ಅರಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮೂಡಬಿದ್ರೆ ಎಕ್ಸಲೆಂಟ್‍ನ ಕಲಾ ಶಿಕ್ಷಕ ಭಾಸ್ಕರ ನೆಲ್ಯಾಡಿ, ಸಾಹಿತಿ ರಮೇಶ ಉಳಯ, ಸೈಂಟ್ ತೆರೆಸಾ ಮಂಗಳೂರಿನ ಕಲಾ ಶಿಕ್ಷಕ ಸುಧೀರ್ ಬಾಳೆಪುಣಿ, ಪುತ್ತೂರಿನ ಪ್ರಸಿದ್ಧ ಒರಿಗಾಮಿ ಕಲಾವಿದ ಚರಣ್ ಕುಮಾರ್ ಪುದು, ಖ್ಯಾತ ಯಕ್ಷಗಾನ ಕಲಾವಿದ ಶಿಕ್ಷಕ ತಾರಾನಾಥ ಸವಣೂರು, ಖ್ಯಾತ ಗೂಡುದೀಪ ಕಲಾವಿದೆ ಶ್ರೀಮತಿ ಯಶೋಧಾ ಹಂಟ್ಯಾರು ಶಿಬಿರಾಧಿಕಾರಿಗಳಾದ ಅರೆಲ್ತಡಿ ಶಿಕ್ಷಕರಾದ ಶ್ರೀಕಾಂತ್ ಕಂಬಳಕೋಡಿ, ಸಂಜಯನಗರ ಶಾಲಾ ಶಿಕ್ಷಕಿಯರಾದ ಶ್ರೀಮತಿ ಸ್ಮಿತಾಶ್ರೀ ಬಿ, ಶ್ರೀಮತಿ ಸುನಿಲ, ಹಾರಾಡಿ ಶಾಲಾ ಶಿಕ್ಷಕಿ ಗಂಗಾವತಿ, ಧನ್ಯ ಕುಮಾರಿ, ಪುಣ್ಚಪ್ಪಾಡಿ ಶಾಲಾ ಶಿಕ್ಷಕರಾದ ರಶ್ಮಿತಾ ನರಿಮೊಗರು ಮುಂತಾದವರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ : ದಿನಾಂಕ : 24.05.2022 ರಂದು ಅಪರಾಹ್ನ 3.00ಕ್ಕೆ

ಡಾ. ಶಿವರಾಮ ಕಾರಂತರ ಕನಸು ಮಕ್ಕಳ ಕಲರವದ ಮೂಲಕ ನನಸಾಗುತ್ತಿದೆ. ಬಾಲವನದಲ್ಲಿ ನಿರಂತರ ಕಾರ್ಯಕ್ರಮ ನಡೆಯಬೇಕೆಂಬ ಅಪೇಕ್ಷೆ ಇದ್ದರೂ ಕೋವಿಡ್ ಅಡ್ಡಿಯಾಯಿತು. ಇದೀಗ ಕೋವಿಡ್ ಬಳಿಕ ಮತ್ತೆ ಮಕ್ಕಳ ಕಲರವ ಬಾಲವನದಲ್ಲಿ ಮೂಡಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಾಲವನದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ದಾಖಲಿಸುವ ನಿಟ್ಟಿನಲ್ಲಿ ತಿಂಗಳಿಗೊಂದರಂತೆ ಹೊರಬರುವ ಕಾರಂತವಾಣಿ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಬಾಲವನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಹಾಗೂ ಸಹಾಯಕ ಆಯುಕ್ತರಾದ ಶ್ರೀ ಗಿರೀಶ್ ನಂದನ್ ಬಾಲವನದಲ್ಲಿ ನಡೆಯುವ ಶಿಬಿರಕ್ಕೆ ವಿಶೇಷತೆ ಇದೆ. ಮಕ್ಕಳ ಕಲೆಯ ಬಗ್ಗೆ ಉತ್ತೇಜನ ಕೊಡುವ ಶಿಬಿರ ಇದಾಗಿದೆ. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ತರಹ ಕುಣಿದಾಡಿ 5ದಿನ ಶಿಬಿರ ನಡೆಸಿರುವುದು ಸಂತಸ ತಂದಿದೆ. ಪ್ರಸ್ತುತ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತೊಡಗಿಸಿಕೊಂಡ ಮಕ್ಕಳಿಗೆ ಈ ಶಿಬಿರ ಮಹತ್ವದ ಅರಿವು ಮೂಡಿಸಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಶ್ರೀ ಪುತ್ತೂರು ಉಮೇಶ ನಾಯಕ್ ಮಾತನಾಡಿ ಅರಿವಿಲ್ಲದೆ ಮೊಬೈಲ್‍ಗೆ ಜಾರಿ ಹೋಗುತ್ತಿರುವ ಮಕ್ಕಳಿಗೆ ಈ ಶಿಬಿರ ಕ್ರಿಯಾತ್ಮಕವಾಗಿ ಬೆಳೆಯಲು ಸಹಕಾರಿಯಾಗಿದೆ ಎಂದರು. ಮಕ್ಕಳ ಹಸ್ತಪ್ರತಿಯನ್ನು ನಗರಸಭಾ ಸದಸ್ಯೆ ಶ್ರೀಮತಿ ದೀಕ್ಷಾ ಪೈ ಬಿಡುಗಡೆ ಗೊಳಿಸಿದರು.

ಗೂಗಲ್ ಫಾರಂ ಮೂಲಕ 5ರಿಂದ 10ನೇ ತರಗತಿಯ ಆಯ್ದ 100 ಮಕ್ಕಳಿಗೆ ಆಯೋಜಿಸಿದ ಈ ಶಿಬಿರದಲ್ಲಿ ಹಾಡು-ಅಭಿನಯ, ಕ್ರಾಫ್ಟ್, ಮನೋರಂಜನಾ ಆಟಗಳು, ಕ್ರಿಯಾತ್ಮಕ ಚಿತ್ರಕಲೆ ಇತ್ಯಾದಿ ಸೃಜನಶೀಲ ವಿಷಯಗಳನ್ನು ಶಿವರಾಮ ಕಾರಂತ ಬಯಲು ರಂಗ ಮಂದಿರದಲ್ಲಿ ಸಮಾರಂಭದ ಆರಂಭದಲ್ಲಿ ಪ್ರದರ್ಶಿಸಿದರು. ಸಹಾಯಕ ಆಯುಕ್ತರ ಪತ್ನಿ ಶ್ರೀಮತಿ ಆಶಾಲತ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಅನ್ನಿಕಾ, ಸಾಕ್ಷಿ, ಸಾರ್ಥಕ್, ಪ್ರಣಮ್ಯ, ತ್ರಿಶಾಲ್ ಕೆ.ಜೆ, ಚರಣ್ ಜಗದೀಶ್, ಆದ್ಯ ಅಡೂರ್, ಪೋಷಕರು ಹಾಗೂ ಶಿಬಿರ ತರಬೇತುದಾರರಾದ ಚರಣ್ ಪುದು ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸಹಶಿಕ್ಷಕಿ ಶ್ರೀಮತಿ ಗಂಗಾ, ಧನ್ಯಕುಮಾರಿ, ಸ್ಮಿತಾಶ್ರೀ, ಸುನಿಲ, ಶ್ರೀಕಾಂತ್ ಅತಿಥಿಗಳನ್ನು ಗೌರವಿಸಿದರು, ಕಾರ್ಯಕ್ರಮ ಸಂಯೋಜಕ ಶ್ರೀ ಜಗನ್ನಾಥ ಅರಿಯಡ್ಕ ಸ್ವಾಗತಿಸಿ ವಂದಿಸಿದರು. ರಶ್ಮಿತಾ ನರಿಮೊಗರು ಕಾರ್ಯಕ್ರಮ ನಿರೂಪಿಸಿದರು.