ಪರ್ಲಡ್ಕ, ಪುತ್ತೂರು, ಕರ್ನಾಟಕ - 574201
ಸಮಯ
10:00 AM - 6:00 PM

ಸರಸಮ್ಮನ ಸಮಾಧಿ

   ಡಾ.ಕಾರಂತರ ಕಾದಂಬರಿಗಳು ಮನುಷ್ಯ ಸಂಬಂಧವನ್ನು ಹುಡುಕುತ್ತವೆ: ಡಾ.ಆರ್ ಚಲಪತಿ 

ಡಾ.ಶಿವರಾಮ ಕಾರಂತರು ನಿರಂತರ ಹುಡುಕಾಟದಲ್ಲೇ ಕಾಲ ಕಳೆದವರು. ಈ ಹಿಡುಕಾಟದಲ್ಲಿ ಮನುಷ್ಯ ಸಂಬಂಧವೇ ಪ್ರಧಾನವೆನ್ನುವುದನ್ನು ಅವರ ಕಾದಂಬರಿಗಳ ಓದಿನಿಂದ ತಿಳಿಯಬಹುದು. ಅಂತಹಾ ಹುಡುಕಾಟದ ಹಿನ್ನಲೆ ಇರುವ ಬಹುಮುಖ್ಯ ಕಾದಂಬರಿ ಸರಸಮ್ಮನ ಸಮಾಧಿ ಎಂದು ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ಮೈಸೂರು ಇಲ್ಲಿಯ ಸಂಶೋಧಕ, ವಿಮರ್ಶಕ ಡಾ.ಆರ್ ಚಲಪತಿ ಅಭಿಪ್ರಾಯ ಪಟ್ಟರು. ಅವರು ದಿನಾಂಕ:11.09.2020 ರಂದು ಡಾ.ಶಿವರಾಮ ಕಾರಂತರ ಬಾಲವನದ ವಾರದ ಆನ್‍ಲೈನ್ ಕಾರ್ಯಕ್ರಮದಲ್ಲಿ ಡಾ.ಶಿವರಾಮ ಕಾರಂತರ ಕಾದಂಬರಿ ಸರಸಮ್ಮನ ಸಮಾಧಿಯನ್ನು ವಿಶ್ಲೇಶಿಸಿ ಮಾತನಾಡಿದರು. 

ಡಾ.ಕಾರಂತರ ಹಲವು ಕಾದಂಬರಿಗಳಲ್ಲಿ ಈ ಸರಸಮ್ಮನ ಸಮಾಧಿ ಕಾದಂಬರಿಯೂ ಪ್ರಮುಖವಾದುದು. ನಲವತ್ತರ ದಶಕದಲ್ಲಿ ಭಾರತೀಯ ಅದರಲ್ಲೂ ತಾವು ಹುಟ್ಟಿ ಬೆಳೆದ ಪರಿಸರದ ಹೆಣ್ಣು ಮಗಳ ಆಂತರಿಕ ತುಮುಲ, ಸಂಘರ್ಷ ಹಾಗೂ ಪುರುಷ ಪ್ರಧಾನ ಸಮಾಜವೊಂದರ ಬಿಗಿ ಹಿಡಿತದ ಬಗ್ಗೆ ಈ ಕಾದಂಬರಿ ಬೆಳಕು ಚಲ್ಲುತ್ತದೆ. ಪ್ರಕೃತಿಯ ಮುಂದೆ ಒಬ್ಬ ಮನುಷ್ಯ ಅದರಲ್ಲೂ ಹೆಣ್ಣು ನಿಲ್ಲಬೇಕಾದ ಪರಿಸ್ಥಿತಿ ಮತ್ತು ಅಗತ್ಯವನ್ನು ಕಾರಂತರು ಅತ್ಯಂತ ಪ್ರಬಲವಾಗಿ ಪ್ರತಿಪಾದಿಸುವುದನ್ನು ನಾವಿಲ್ಲಿ ಕಾಣುತ್ತೇವೆ. ಇದು ಕಾರಂತರ ಬಹುತೇಕ ಕಾದಂಬರಿಗಳ ನೆಯೂ ಆಗಿರುತ್ತದೆ ಎಂದು ಅವರು ವಿವರಿಸಿದರು.

 ಡಾ.ಶಿವರಾಮ ಕಾರಂತರ ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ.ಸುಂದರ ಕೇನಾಜೆ ಸ್ವಾಗತಿಸಿ ಪರಿಚಯಿಸಿದ ಈ ಕಾರ್ಯಕ್ರಮ ಬಾಲವನ ಫೇಸ್‍ಬುಕ್, ವಾಟ್ಸ್ ಆಪ್ ಹಾಗೂ ಇನ್ನಿತರ ಆನ್‍ಲೈನ್ ಗ್ರೂಪ್‍ಗಳಲ್ಲಿ ಪ್ರಸಾರವಾಯಿತು.