ನನ್ನದು ಕಾರಂತರ ಊರು ಕೋಟ. ಕಾರಂತ ಥೀಮ್ ಪಾರ್ಕ್ ನಮ್ಮ ಮನೆಯ ಸಮೀಪವೇ ಇದೆ. ಕಾರಂತರನ್ನು ಹತ್ತಿರದಿಂದ ಕಂಡು ಮೈಮನ ತುಂಬಿಸಿಕೊಂಡವನು. ಬೆಟ್ಟದಂತಹ ಜೀವ. ನಿತ್ಯವೂ ಸಮೀಪದ ವಿವೇಕ ಕಾಲೇಜಿನವರೆಗೆ ಅವರ ಸಾಲಿಗ್ರಾಮದ ಮನೆಯಿಂದ ವಾಕಿಂಗ್ ಮಾಡಿಕೊಂಡು ಶಾಲಾವರಣದ ಕಲ್ಲು ಬೆಂಚಿನ ಮೇಲೆ ಕುಳಿತುಕೊಳ್ಳುತ್ತಿದ್ದರು. ಆಗಲೇ ಅವರನ್ನು ತುಂಬಿಸಿಕೊಂಡಿದ್ದೆ. ನಮ್ಮ ಹಂದೆ ಕುಟುಂಬಕ್ಕೆ ಆಪ್ತರು. ನನ್ನ ಉಪನಯನಕ್ಕೆ(1986) ಮನೆಗೆ ಬಂದು ಹರಸಿದ್ದರು. ಉಪನಯನ ಸಂಸ್ಕಾರ ಆದ ಮೇಲೆ ನಿಂತುಕೊಂಡು ಉಚ್ಚೆ ಹೊಯ್ಯಲಿಕ್ಕಿಲ್ಲ, ಜನಿವಾರ ಕಿವಿಗೆ ಸಿಕ್ಕಿಸಿಕೊಳ್ಳಬೇಕು ಅಂತ ತಮಾಷೆಯ ಮಾತುಗಳನ್ನಾಡಿ ನಕ್ಕರು.
ಮುಂದೆ ಕೋಟದ ಮಿತ್ರಮಂಡಳಿಯು ಸಾಹಿತ್ಯಾಸಕ್ತರ ಒಳಗೊಂಡು ಆಯೋಜಿಸಿದ ಕಾರಂತ 90 , 95 ರ ಉತ್ಸವ ದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆ. ಅಂದು ಕಾರಂತರು ಗೆಜ್ಜೆ ಕಟ್ಟುವಾಗ ಬಳಿಯಲ್ಲಿಯೇ ಇದ್ದೆ.
ನಾವು ಯುವಕರು ಒಂದಿಷ್ಟು ಮಂದಿ ಕಾರಂತ ಕಲಾ ಸಾಹಿತ್ಯ ವೇದಿಕೆಯನ್ನು ಕಟ್ಟಿಕೊಂಡು ಅನೇಕ ಕಾರ್ಯಕ್ರಮ ನಡೆಸಿದೆವು. ಪ್ರತಿವರ್ಷ ನಮ್ಮ ತಂದೆಯೊಂದಿಗೆ ಕಾರಂತರ ಹುಟ್ಟು ಹಬ್ಬಕ್ಜೆ ಸಾಲಿಗ್ರಾಮದ ಮಾನಸ ಮನೆಗೆ ಹೋಗುತ್ತಿದ್ದೆ. ಅವರಿಗೆ ಹಾರ ಅರ್ಪಿಸಿ, ಅಲ್ಲಿಯೇ ತಿಂಡಿ ತಿಂದು ಬರುತ್ತಿದ್ದ ನೆನಪು ಈಗಲೂ ಇದೆ.
ಒಮ್ಮೆ ನಾವು ಮಿತ್ರರು ಹತ್ತು ಮಂದಿ ಸೇರಿ ಅವರ ಮನೆಗೆ ಹೋದಾಗ ಗ್ರೂಪ್ ಪೋಟೋಗೆ ವಿನಂತಿಸಿಕೊಂಡಾಗ ಸಂತಸದಿಂದ ಒಪ್ಪಿ, ಎಲ್ಲರೂ ನನ್ನ ಸುತ್ತ ನಿಲ್ಲಿ ಎನ್ನುತ್ತ 'ನಾಳೆ ಪೇಪರ್ ನಲ್ಲಿ ಕಾರಂತರ ಬಂಧನ ಅಂತ ಹಾಕಬೇಕು' ಅಂತ ನಮ್ಮನ್ನು ನಗೆಯ ಕಡಲಲ್ಲಿ ತೇಲಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ. ವಿಭಾಗದಲ್ಲಿ ಒಂದು ಪತ್ರಿಕೆಗಾಗಿ ವಿಶೇಷ ಸಾಹಿತಿಯಾಗಿ ಕಾರಂತರ ಬರಹಗಳನ್ನು ಅಧ್ಯಯನ ಮಾಡುವ ಅವಕಾಶವಿತ್ತು. ಆ ಪತ್ರಿಕೆಯಲ್ಲಿ ಪ್ರಥಮ ಬಂದವರನ್ನು ಕಾನ್ವಕೇಷನ್ ಸಂದರ್ಭದಲ್ಲಿ ಗುರುತಿಸಿ ಗೌರವಿಸುವ ಸಂಪ್ರದಾಯವಿದೆ. 1997 ರ ಆ ಭಾಗ್ಯ ನನ್ನದಾಗಿತ್ತು ಎಂಬಲ್ಲಿ ಧನ್ಯತೆಯಿದೆ.
ಕಾರಂತರ ಯಕ್ಷಗಾನ ಬ್ಯಾಲೆಯ ಪುನರ್ ನಿರ್ಮಾಣ ಸಂದರ್ಭದಲ್ಲಿ ಮಾಲಿನಿ ಮಲ್ಯರಿಗೆ ನಮ್ಮ ತಂದೆಯೊಂದಿಗೆ ನಾನೂ ಕೈಜೋಡಿಸಿದ್ದೆ. ಕೋಟ, ಬೆಂಗಳೂರು ಸೇರಿದಂತೆ ಪಂಚವಟಿ ಯಕ್ಷಬ್ಯಾಲೆಯಲ್ಲಿ ಹಿರಿಯ ಕಲಾವಿದ ಹಾರಾಡಿ ಮಹಾಬಲ ಗಾಣಿಗರೊಂದಿಗೆ ಲಕ್ಷ್ಮಣನಾಗಿ ಪಾತ್ರವಹಿಸಿದ್ದೆ.
ಕವಿವಾಣಿ ನೆನಪಾಗುತ್ತದೆ. ' ಅನುಭವವೂ ಸವಿಯಲ್ಲ, ಅದರ ನೆನಪೇ ಸವಿಯು'.
- ಸುಜಯೀಂದ್ರ ಹಂದೆ ಕೋಟ