ಪರ್ಲಡ್ಕ, ಪುತ್ತೂರು, ಕರ್ನಾಟಕ - 574201
ಸಮಯ
10:00 AM - 6:00 PM

ತಾಳ ಮದ್ದಳೆ ಉತ್ಸವ

 ಪುತ್ತೂರು : ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು, ಡಾ| ಶಿವರಾಮ ಕಾರಂತ ಬಾಲವನ ಸಮಿತಿ, ಪುತ್ತೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ತಾಲೂಕು ಇದರ ವತಿಯಿಂದ ಡಾ| ಶಿವರಾಮ ಕಾರಂತ ಬಾಲವನದಲ್ಲಿ ನಡೆಯುವ ಮಾರ್ಚ್ 2022 ರ ತಿಂಗಳ ಕಾರ್ಯಕ್ರಮವು ದಿನಾಂಕ : 26.03.2022 ಶನಿವಾರ ಅಪರಾಹ್ನ 2.00 ಗಂಟೆಯಿಂದ ರಾತ್ರಿ 7.45 ರ ತನಕ ನಡೆಯಿತು. ಡಾ| ಶಿವರಾಮ ಕಾರಂತ ಬಾಲವನ ಸಮಿತಿ ಅಧ್ಯಕ್ಷರೂ, ಸಹಾಯಕ ಆಯುಕ್ತರಾದ ಶ್ರೀ ಗಿರೀಶ್ ನಂದನ್ ಎಂ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ಶ್ರೀ ಸವಣೂರು ಸೀತಾರಾಮ ರೈ ದೀಪಬೆಳಗಿಸಿ, ಚೆಂಡೆ ನುಡಿಸುವ ಮೂಲಕ ಉದ್ಘಾಟಿಸಿದರು. ಉದ್ಘಾಟನಾ ಮಾತುಗಳನ್ನಾಡಿದ ಶ್ರೀಯುತರು ಯಕ್ಷಗಾನ ಕಾರಂತರಿಗೆ ಪ್ರಿಯವಾದ ಕಲೆ ಇದನ್ನು ಉಳಿಸಿ ಬೆಳಸಬೇಕು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ಶ್ರೀ ರಾಜೇಶ್ ಜಿ ಮಾತನಾಡಿ ಕಾರಂತ ಸಾಹಿತ್ಯದ ಕನಸನ್ನು ನಾವು ನನಸಾಗಿಸಲು ಈ ಕಾರ್ಯಕ್ರಮಗಳು ಸಹಕಾರಿ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಶ್ರೀ ಗಿರೀಶ್ ನಂದನ್ ರವರು ಬಾಲವನದಲ್ಲಿ ಇನ್ನಷ್ಟು ಸಾಹಿತಿಕ ಚಟುವಟಿಕೆಗಳನ್ನು ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ನಂತರ ನಡೆದ “ಸಂವಾದ” ತಾಳಮದ್ದಳೆ ಉತ್ಸವದಲ್ಲಿ ಹಿರಿಯ ಅರ್ಥದಾರಿ ಶ್ರೀ ಭಾಸ್ಕರ್ ಬಾರ್ಯ ಅವರ ಸಂಯೋಜನೆಯಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು, ಪುತ್ತೂರು ಇವರಿಂದ “ಶರಸೇತು” ಎಂಬ ಪ್ರಸಂಗ, ಯಕ್ಷಗಾನ ಕಲಾವಿದ ಶ್ರೀ ತಾರಾನಾಥ ಸವಣೂರು ಸಂಯೋಜನೆ ಯಲ್ಲಿ ಶ್ರವಣ ರಂಗ ಪ್ರತಿಷ್ಠಾನ (ರಿ) ಸವಣೂರು ಇವರಿಂದ “ತುಳುನಾಡ ಬಲಿಯೇಂದ್ರೆ” ಎಂಬ ಪ್ರಸಂಗ, ಶ್ರೀ ಆಂಜನೇಯ ಯಕ್ಷಗಾನ ಸಂಘ ಬೊಳುವಾರು, ಪುತ್ತೂರು ಇವರಿಂದ “ಸುಧನ್ವ ಮೋಕ್ಷ” ಎಂಬ ಪ್ರಸಂಗ, ಹಾಗೂ ಬಣ್ಣದ ವೇಷದಾರಿ ಶಿಕ್ಷಕ ಶ್ರೀ ಹರಿಕಿರಣ್ ಕೊಯಿಲ ರವರ ಸಂಯೋಜನೆಯಲ್ಲಿ ಯಕ್ಷನಂದನ ಕಲಾ ಸಂಘ ಗೋಕುಲನಗರ-ಕೊಯಿಲ ಇವರಿಂದ “ಶರಣ ವಿಭೀಷಣ” ಎಂಬ ಪ್ರಸಂಗಗಳ ಯಕ್ಷಗಾನ ತಾಳಮದ್ದಳೆ ಉತ್ಸವ ನಡೆಯಿತು. ಸತೀಶ್ ಇರ್ದೆ, ತಾರಾನಾಥ ಸವಣೂರು, ಗಣರಾಜ ಕುಂಬ್ಳೆ, ಗುಡ್ಡಪ್ಪ ಬಲ್ಯ ಮುಂತಾದ ಸುಮಾರು 40ಕ್ಕಿಂತಲೂ ಹೆಚ್ಚು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎಲ್ಲಾ ಕಲಾವಿದರನ್ನು ಹೂವು, ಶಾಲು, ಪ್ರಶಸ್ತಿ ಪತ್ರ ಮತ್ತು ಪುಸ್ತಕ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಅಶೋಕ ಮಣಿಯಾಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕಾರ್ಯಕ್ರಮ ಸಂಯೋಜಕರಾದ ಶ್ರೀ ಜಗನ್ನಾಥ್ ಅರಿಯಡ್ಕ ಸ್ವಾಗತಿಸಿದರು. ಶಿಕ್ಷಕಿ ಸ್ಮಿತಾಶ್ರೀ ನಿರೂಪಿಸಿದರು.